ಚ್ಯಾನಲ್ ದ್ವೀಪಗಳು

ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ಫ್ರಾನ್ಸಿನ ಕೋಟಾಂಟನ್ ಪರ್ಯಾಯ ದ್ವೀಪದ ವಾಯುವ್ಯಕ್ಕೆ ಉ.ಅ. 480 5'-490 45' ಮತ್ತು ಪ.ರೇ. 10 50' -20 45' ನಡುವೆ ಹಬ್ಬಿರುವ, ಇಂಗ್ಲೆಂಡಿನ ರಾಜತ್ವಕ್ಕೆ ಒಳಪಟ್ಟ ದ್ವೀಪಸ್ತೋಮ. ಜರ್ಸಿ, ಗನ್ರ್ಸಿ, ಆಲ್ಡರ್ನಿ ಮತ್ತು ಸಾರ್ಕ್ ಎಂಬ ನಾಲ್ಕು ಮುಖ್ಯದ್ವೀಪಗಳೂ ಅನೇಕ ಚಿಕ್ಕಪುಟ್ಟ ದ್ವೀಪಗಳೂ ಬಂಡೆ ಮತ್ತು ದಿಬ್ಬಗಳೂ ಪ್ರದೇಶಗಳೂ ಇವೆ. ಚ್ಯಾನೆಲ್ ದ್ವೀಪಗಳ ಒಟ್ಟು ವಿಸ್ತೀರ್ಣ 75 ಚ.ಮೈ. ಜನಸಂಖ್ಯೆ 1,25,240 (1971).
ಭೌತಲಕ್ಷಣ : ದ್ವೀಪಗಳು ಸಮುದ್ರಮಟ್ಟದಿಂದ ಬಹಳ ಎತ್ತರದಲ್ಲಿಲ್ಲ. ಉತ್ತರ ಜರ್ಸಿ (400'), ದಕ್ಷಿಣ ಗನ್ರ್ಸಿ (349') ದಕ್ಷಿಣ ಆಲ್ಡರ್ನಿ (281') ಈ ದ್ವೀಪದ ಉನ್ನತ ಭಾಗಗಳು. ಇವು ಕಡಿದಾದ ಬಂಡೆಗಳಿಂದಲೂ ಸಣ್ಣ ಕಣಿವೆಗಳಿಂದಲೂ ಸುಂದರವಾದ ಸಣ್ಣ ಕೊಲ್ಲಿಗಳಿಂದಲೂ ಕೂಡಿವೆ. ಉತ್ತರ ಗನ್ರ್ಸಿ ಮತ್ತು ದಕ್ಷಿಣ ಜರ್ಸಿ ತಗ್ಗಾಗಿ, ವಿರಳವಾದ ಗಿರಿಗಳಿಂದ ಕೂಡಿವೆ. ಜರ್ಸಿಯ ಪಶ್ಚಿಮ ಮತ್ತು ಆಗ್ನೇಯ ಭಾಗಗಳಲ್ಲೂ ಗನ್ರ್ಸಿಯ ಉತ್ತರದಲ್ಲೂ ಆಲ್ಡರ್ನಿಯ ಪೂರ್ವದಲ್ಲೂ ಮರಳ ದಿಣ್ಣೆಗಳುಂಟು. ಈ ದ್ವೀಪಗಳ ಬಂಡೆಗಳು ಮೆದು. ಆದ್ದರಿಂದ ಅಲ್ಲಲ್ಲಿ ಸವೆದು ಉದ್ದನೆಯ ಕಿರಿದಾದ ಗುಹೆಗಳಾಗಿವೆ. ದ್ವೀಪಗಳಲ್ಲಿ ಮುಖ್ಯವಾದ ಹೊಳೆಗಳು ಯಾವುವೂ ಇಲ್ಲ.

ವಾಯುಗುಣ : ಇಲ್ಲಿಯದು ಸಾಗರಿಕ ವಾಯುಗುಣ. ಅಟ್ಲಾಂಟಿಕ್ ಸಾಗರದ ಮೇಲಿಂದ ಬೀಸುವ ಪಶ್ಚಿಮ ಮಾರುತಗಳ ಪ್ರಭಾವಕ್ಕೆ ಇದು ಒಳಗಾಗಿದೆ. ಆಗಸ್ಟ್ ಅತ್ಯಂತ ಉಷ್ಣದ ಹಾಗೂ ಫೆಬ್ರುವರಿ ಅತ್ಯಂತ ಚಳಿಯ ತಿಂಗಳುಗಳು. ಈ ತಿಂಗಳುಗಳ ಸರಾಸರಿ ಉಷ್ಣತೆ ಅನುಕ್ರಮವಾಗಿ 43( ಫ್ಯಾ. ಮತ್ತು 61( ಫ್ಯಾ. ಹಿಮ ಬೀಳುವುದು ವಿರಳ. ಜುಲೈ ತಿಂಗಳಲ್ಲಿ ಕನಿಷ್ಟ ಮಳೆ (ಸರಾಸರಿ 2" ಗಿಂತ ಕಡಿಮೆ); ಅಕ್ಟೋಬರಿನಲ್ಲಿ ಗರಿಷ್ಠ (ಸರಾಸರಿ ). ಒಟ್ಟಿನಲ್ಲಿ ವರ್ಷಕ್ಕೆ ಸ್ಥೂಲವಾಗಿ 30"-10" ಮಳೆಯಾಗುತ್ತದೆ.

ಸಸ್ಯ, ಪ್ರಾಣಿಜೀವನ : ಬಿಸಿಲಿನಿಂದ ಕೂಡಿದ, ಕೊರೆಯುವ ಚಳಿ ಇಲ್ಲದ, ತಕ್ಕಮಟ್ಟಿಗೆ ಮಳೆ ಬೀಳುವ ಈ ದ್ವೀಪಗಳಲ್ಲಿ ಮೆಡಿಟರೇನಿಯನ್ ಜಾತಿಯ ಮತ್ತು ದಕ್ಷಿಣದ ಇತರ ಬಗೆಯ ಸಸ್ಯಗಳು ಹಲವು ಬೆಳೆಯುತ್ತವೆ. ಕಾಡುಗಳಲ್ಲೂ ಹಾದಿಯ ಇಕ್ಕೆಲಗಳಲ್ಲೂ ಫ್ಯೂಷ, ಜಪಾನಿಕ, ಕಮೆಲಿಯ, ಅಕೇಷಿಯ, ಮಿಮೋಸ, ಹೈಡ್ರಾಂಜಿಯ, ಕ್ಲೆಮಟಿಸ್, ಟ್ಯಾಮರಿಸ್ಕ್, ಗನರ ಮತ್ತು ಕೊಲಂಬೈನ್ ಬೆಳೆಯುತ್ತವೆ, ಹೂ ಬಿಡುವ ಸುಮಾರು 700 ಬಗೆಯ ಸಸ್ಯಗಳನ್ನು ಇಲ್ಲಿ ಗುರುತಿಸಲಾಗಿದೆ. ಬ್ರಿಟನ್ನಿನ ಉಳಿದೆಡೆಗಳಲ್ಲಿ ಇಲ್ಲದೆ, ಇದ್ದರು ವಿರಳವಾಗಿರುವ, ಅನೇಕ ಸಸ್ಯಗಳು-ರೊಮ್ಯುಳಿ, ಅಗಲ ಎಲೆಯ ತ್ರಿಫ್ಟ್, ಆರ್ಕಿಸ್, ವಾಲ್ ಡೇಸಿ, ಕ್ವಿಲ್ ವಾರ್ಟ್, ಕಚ್ಚೂರಿ ಮುಂತಾದವು-ಇಲ್ಲಿವೆ. ಸಾಂದ್ರಬೇಸಾಯಕ್ಕಾಗಿ ಮರಗಳನ್ನು ಬಹುತೇಕ ಕಡಿಯಲಾಗಿದ್ದರೂ ಓಕ್, ಆಷ್, ವಿಚ್-ಎಲ್ಮ್, ಬೀಚ್, ಲೈಮ್, ಬರ್ಡ್, ಪೈನ್, ಆಲ್ಡರ್ ಸಿಡಾರ್, ಹ್ಯಾeóÉಲ್ ಮರಗಳಿವೆ. ನೆರಳಿಸುವ ಓಣಿಗಳಲ್ಲೂ ಬೆಟ್ಟಗಳ ಬದಿಯಲ್ಲೂ ಫರ್ನ್, ಪಾಚಿ ಕಲ್ಲುಹೂವು ಬೆಳೆಯುತ್ತವೆ. ಕಾಡು ಡ್ಯಾಪೊಡಿಲ್, ಫಾಕ್ಸ್ ಗ್ಲೋವ್, ಗಾರ್ಸ್ ಮುಂತಾದವೂ ಉಂಟು. ಇಲ್ಲಿ ಬೆಳೆಯುವ ಸಮುದ್ರದ ಜೊಂಡನ್ನು ಗೊಬ್ಬರವಾಗಿ ಉಪಯೋಗಿಸುತ್ತಾರೆ.
ಈ ದ್ವೀಪಗಳು ಕಿರಿದಾಗಿರುವುದರಿಂದಲೂ ಪ್ರಾಗಿತಿಹಾಸ ಕಾಲದಿಂದಲೂ ಬೇರ್ಪಟ್ಟಿರುವುದರಿಂದಲೂ ಜನಸಾಂದ್ರತೆಯಿಂದ ಕೂಡಿರುವುದರಿಂದಲೂ ಇಲ್ಲಿ ನೆಲದ ಪ್ರಾಣಿಗಳು ಪರಿಮಿತ. ಮೊಲಗಳು ವಿಶೇಷವಾಗಿವೆ. ಮುಳ್ಳುಹಂದಿ, ಕಾಡಿಲಿ, ಮನೆ ಇಲಿ, ಕಪ್ಪು ಕಂದು ಇಲಿಗಳೂ ಇವೆ. ಜರ್ಸಿ, ಆಲ್ಡರ್ನಿಗಳಲ್ಲಿ ಮುಖಮಲ್ ಹೆಗ್ಗಣ (ಮೋಲ್) ಉಂಟು. ಗನ್ರ್ಸಿಯಲ್ಲಿ ಫೀಲ್ಡ್ ವೋಲ್, ಜರ್ಸಿಯಲ್ಲಿ ಬ್ಯಾಂಕ್ ವೋಲ್ ಇವೆ. ಕೆಂಪು ಅಳಿಲು, ಸ್ಟೊಟ್, ನರಿ-ಇವು ಇತರ ಪ್ರಾಣಿಗಳು, ಬಾವಲಿಗಳು ವಿರಳ, ತೀರ ಸಮುದ್ರದಲ್ಲಿ ಅಟ್ಲಾಂಟಿಕ್ ಸೀಲ್‍ಗಳು ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ. ಕಡಲಹಂದಿ, ಹಂದಿಮೀನು, ಕಡಲಾಮೆ ಉಂಟು. ಜರ್ಸಿಯಲ್ಲಿ ಹಸುರು ಹಾವುಗಳು ಇವೆ. ಜರ್ಸಿ ಮತ್ತು ಗಸ್ರ್ನಿಯಲ್ಲಿ ದೊಡ್ಡ ಹಸುರು ಹಲ್ಲಿಗಳುಂಟು.
ಜನಜೀವನ : ನಾರ್ಮನ್ ಬುಡಕಟ್ಟಿನವರೇ ಅಧಿಕ ಸಂಖ್ಯಾತರು. ಇತರ ಮಿಶ್ರ ಬುಡಕಟ್ಟಿನವರೂ ಈ ದ್ವೀಪಗಳಲ್ಲಿದ್ದಾರೆ. ಹೆಚ್ಚು ಜನ ಇರುವುದು ಜರ್ಸಿ ಮತ್ತು ಗನ್ರ್ಸಿ ದ್ವೀಪಗಳಲ್ಲಿ. ಕೆಲವು ದ್ವೀಪಗಳಲ್ಲಿ ಜನವಸತಿಯೇ ಇಲ್ಲ. 19ನೆಯ ಶತಮಾನದಿಂದೀಚೆಗೆ ಜನಸಂಖ್ಯೆ ಹೆಚ್ಚತೊಡಗಿದೆ. ಜನರ ಮುಖ್ಯ ವೃತ್ತಿ ಮೀನುಗಾರಿಕೆ, ಕುರಿಸಾಕಣೆ, ತೊಟಗಾರಿಕೆ ಮತ್ತು ಕೃಷಿ. ಇತ್ತೀಚೆಗೆ ಕೃಷಿಯಲ್ಲಿ ಹೊಸ ಪ್ರಯೋಗಗಳು ನಡೆಯತೊಡಗಿವೆ. ತಂಬಾಕು, ಧಾನ್ಯಗಳನ್ನು ಬೆಳೆಸುತ್ತಾರೆ. ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಈ ದ್ವೀಪಸ್ತೋಮದ ಜನರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯ ಉಚಿತ.
ಆಡಳಿತ ವ್ಯವಸ್ಥೆ : ಈ ದ್ವೀಪಸ್ತೋಮ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತ ರಾಜ್ಯಕ್ಕೆ ಸೇರಿದೆ. ಆದರೆ ಬ್ರಿಟಷ್ ಪಾರ್ಲಿಮೆಂಟಿನ ಕಾನೂನುಗಳೆಲ್ಲ ಇದಕ್ಕೆ ನೇರವಾಗಿ ಅನ್ವಯವಾಗುವುದಿಲ್ಲ. ದ್ವೀಪದಿಂದ ದ್ವೀಪಕ್ಕೆ ಆಡಳಿತ ಮತ್ತು ಕಾನೂನು ವ್ಯತ್ಯಾಸವಾಗುತ್ತದೆ. ಜರ್ಸಿಯ ಲೆಫ್ಟೆನಂಟ್ ಗವರ್ನರ್ ಮತ್ತು ಮಹಾ ದಂಡನಾಯಕ ದೊರೆಯ ಪ್ರತಿನಿಧಿ. ಅವನ ನೇಮಕವಾಗುವುದು ಬ್ರಿಟನ್ನಿನ ದೊರೆ (ಅಥವಾ ರಾಣಿ) ಯಿಂದ, ಸ್ಟೇಟ್ಸ್ ಸಭೆಯ ಅಧ್ಯಕ್ಷ ಬೇಯ್ಲಿಫ್, ಸ್ಟೇಟ್ಸ್ ಸಭೆಯಿಂದ ನೇಮಕಗೊಂಡ ಸಮಿತಿಗಳು ಸರ್ಕಾರ ನಡೆಸುತ್ತವೆ. ಅಧಿಕೃತ ಭಾಷೆ ಫ್ರೆಂಚ್. ದಿನ ಬಳಕೆಯ ಭಾಷೆ ಇಂಗ್ಲಿಷ್. ಜರ್ಸಿಯಂತೆ ಗನ್ರ್ಸಿಗೂ ಒಬ್ಬ ಲೆಫ್ಟೆನೆಂಟ್ ಗವರ್ನರರೂ ಬೇಯ್ಲಿಫನೂ ಇದ್ದಾರೆ. ಇದರ ಆಡಳಿತವನ್ನೂ ಸಮಿತಿಗಳು ನಡೆಸುತ್ತವೆ. ಆಲ್ಡರ್ನಿ, ಸಾರ್ಕ್ ಮತ್ತು ಹರ್ಮ್ ದ್ವೀಪಗಳಿಗೆ ಅನುಕ್ರಮವಾಗಿ ಅಧ್ಯಕ್ಷ. ಡೇಮ್ ಮತ್ತು ಟೆನೆಂಟರು ಮುಖ್ಯರು. ಸಾರ್ಕಿನ ಡೇಮ್ ಹುದ್ಧೆ ವಂಶಪಾರಂಪರ್ಯವಾದ್ದು ಗೋರೆ, ಸೇಂಟ್ ಆಬಿನ್, ಸೇಂಟ್ ಪೀಟರ್ ಪೊರ್ಟ್, ಸೇಂಟ್ ಸ್ಯಾಂಪ್ಸನ್ ಮತ್ತು ಸೇಂಟ್ ಹೀಲಿಯರ್ ಪ್ರಮುಖ ಪಟ್ಟಣಗಳು. ಜರ್ಸಿ, ಗನ್ರ್ಸಿ ಮತ್ತು ಆಲ್ಡರ್ನಿಯಲ್ಲಿ ವಿಮಾನನಿಲ್ದಾಣಗಳಿವೆ. ಸೇಂಟ್ ಪೀಟರ್ ಪೋರ್ಟ್ ಮತ್ತು ಸೇಂಟ್ ಸ್ಯಾಂಪ್ಸನ್ ಪ್ರಮುಖ ರೇವುಗಳು. ರಫ್ತು; ಆಲೂಗೆಡ್ಡೆ, ಟೊಮ್ಯಾಟೊ, ತರಕಾರಿ, ಕಬ್ಬಿಣದ ಹಳೆ ಚೂರು, ತಾರೆಣ್ಣೆ, ಆಮದು; ಆಹಾರ ಧಾನ್ಯಗಳು, ಇಂಧನ, ಪೆಟ್ರೋಲಿಯಂ, ಗೊಬ್ಬರ, ರಾಸಾಯನಿಕ ವಸ್ತುಗಳು.
ಹಿತಕರ ವಾಯುಗುಣ ಮತ್ತು ಸಂಚಾರ ವ್ಯವಸ್ಥೆಗಳಿಮದ ಕೂಡಿರುವ ನಿಸಗ್ ಸೌಂದರ್ಯವುಳ್ಳ ಈ ದ್ವೀಪಗಳಿಗೆ ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿ ಬರುವುದರಿಂದ ಪ್ರವಾಸೊದ್ಯಮ ಅಭಿವೃದ್ಧಿಹೊಂದಿದೆ.
(ಎಚ್.ಜಿ.ಐ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ